ಆಡಿಟ್ ಬ್ಯೂರೊ ಆಫ್ ಸರ್ಕ್ಯುಲೇಷನ್ಸ್ (ಎ ಬಿ ಸಿ)
ಇದು ಅಖಿಲಭಾರತ ಪತ್ರಿಕಾವೃತ್ತಿಸಂಬಂಧಿ ಸಂಸ್ಥೆಗಳಲ್ಲೊಂದು. ಎ.ಬಿ.ಸಿ. ಎಂದು ಇದರ ಸಂಕ್ಷೇಪರೂಪ. ಪತ್ರಿಕಾಪ್ರಸಾರದ ಅಧಿಕೃತ ಲೆಕ್ಕವನ್ನಿಡುವುದು; ಲೆಕ್ಕ ಪತ್ರಗಳ ಸರಿಯಾದ ತಪಾಸಣೆ ಮಾಡುವುದು, ಅಧಿಕೃತ ಅಂಕಿಅಂಶಗಳನ್ನು ನೀಡುವುದು ಈ ಸಂಸ್ಥೆಯ ಮುಖ್ಯ ಕರ್ತವ್ಯಗಳಾಗಿವೆ. ಈ ಸಂಸ್ಥೆ ಸ್ಥಾಪಿತವಾಗುವ ಮೊದಲು ಇಂಥ ಯಾವ ವಿವರಗಳನ್ನೂ ಕೊಡಲು ಸಾಧ್ಯವಾಗುತ್ತಿರಲಿಲ್ಲ. 1948ರಲ್ಲಿ ಈ ಸಂಸ್ಥೆ ಸ್ಥಾಪಿತವಾದ ಮೇಲೆ ತನ್ನ ಸದಸ್ಯ ಪತ್ರಿಕೆಗಳ ಪ್ರಸಾರ, ಆದಾಯ ಮೊದಲಾದ ವಿವರಗಳನ್ನು ಸಂಗ್ರಹಿಸಲು ಪ್ರಾರಂಭಿಸಿತು. ಈ ಸಂಸ್ಥೆಗೆ ಲಾಭದ ದೃಷ್ಟಿಯಿಲ್ಲ, ಪ್ರಪಂಚದಲ್ಲೆಲ್ಲ ಅಧಿಕೃತ ದಾಖಲೆ ಎಂದು ಸ್ವೀಕರಿಸಲಾಗುವುದು.

ಈ ಸಂಸ್ಥೆಯ ನೀತಿಯನ್ನು ರೂಪಿಸುವ, ವ್ಯವಹಾರಗಳನ್ನು ನಿರ್ವಹಿಸುವ ಕಾರ್ಯಭಾರ ಆಡಳಿತ ಮಂಡಳಿಯ ಪ್ರತಿನಿಧಿಗಳನ್ನು ಜಾಹೀರಾತುದಾರರು, ಪ್ರಕಾಶಕರು, ಜಾಹಿರಾತು ವಿಭಾಗಗಳಿಂದ ಪ್ರತಿ ವರ್ಷವೂ ಚುನಾಯಿಸುತ್ತಾರೆ. ಮಂಡಳಿಯಿಂದ ನೇಮಿತವಾದ ಕಾರ್ಯಕಾರಿ ಸಮಿತಿ ದೈನಂದಿನ ಕೆಲಸವನ್ನು ನಿರ್ವಹಿಸುತ್ತದೆ. ಈ ಆಡಳಿತಮಂಡಳಿ ವರ್ಷಕ್ಕೆ ನಾಲ್ಕು ಬಾರಿ, ಕಾರ್ಯಕಾರಿಸಮಿತಿ ಕನಿಷ್ಠಪಕ್ಷ ತಿಂಗಳಿಗೊಮ್ಮೆ ಸಭೆ ಸೇರುತ್ತದೆ. ನೀತಿ ನಿಯಮಗಳಿಗನುಸಾರವಾಗಿ ತನ್ನ ಲೆಕ್ಕಪತ್ರಶೋಧಕನಿಂದ ಸಂಸ್ಥೆ ವಿಧಿಸಿದ ನಿಯಮಾನುಸಾರವಾಗಿ ಪ್ರಸಾರದ ಸಂಪೂರ್ಣ ತನಿಖೆಯನ್ನು ಅರ್ಧವರ್ಷಕ್ಕೊಮ್ಮೆ ಜಾರಿಗೆ ತರಬೇಕು. ಈ ಶೋಧನೆಯಿಂದ ಬಂದ ಅಂಕಿಅಂಶಗಳ ಫಲಿತಾಂಶವನ್ನು ಪ್ರಕಾಶಕರ, ಶೋಧಕರ ಹಸ್ತಾಕ್ಷರದೊಂದಿಗೆ ಸಂಪಾದನ ಅರ್ಹತಾಪತ್ರ ಎಂಬುದಾಗಿ ಸಂಸ್ಥೆಗೆ ಒಪ್ಪಸಬೇಕು. ಇದನ್ನು ಕಾರ್ಯಕಾರಿ ಸಮಿತಿ ಪರಿಶೀಲಿಸಿ ಪರಿಗಣಿಸಿದಾಗ ಒಟ್ಟು ಪ್ರಸಾರವನ್ನು ಕುರಿತು ಎ.ಬಿ.ಸಿ. ಪ್ರಮಾಣಪತ್ರ ನೀಡುತ್ತದೆ.

ಒಟ್ಟು ಪ್ರಸಾರದಲ್ಲಿರುವ ಪತ್ರಿಕಾಪ್ರತಿಗಳೆಂದರೆ ನಿಜವಾಗಿಯೂ ಮಾರಾಟ ಮಾಡಿದ ಪ್ರತಿಗಳೆಂದು ಅರ್ಥ. ಎ,ಬಿ.ಸಿ. ತನ್ನ ಶೋಧಕಮಂಡಳಿಯಿಂದ ಯಾವಾಗ ಬೇಕಾದರೂ ತನ್ನ ಸದಸ್ಯರ ಲೆಕ್ಕಪತ್ರವನ್ನು ಶೋಧಿಸುವ ಅಧಿಕಾರ ಹೊಂದಿದೆ. ಎ.ಬಿ.ಸಿ.ಯಿಂದ ಪ್ರಕಾಶಕನಿಗೂ ಜಾಹಿರಾತುದಾರನಿಗೂ ಲಾಭವಿದೆ. ಜಾಹಿರಾತುದಾರನಿಗೆ ಸಂಸ್ಥೆ ಕೊಡುವ ಪ್ರಮಾಣಪತ್ರವೇ ಖಚಿತ ಆಧಾರ. ಇದನ್ನು ಅವಲಂಬಿಸಿಯೇ ಅವನು-ಅಧಿಕ ಪ್ರಸಾರದ ಪತ್ರಿಕೆಗಳನ್ನು ಗುರುತಿಸಿ ಅವಕ್ಕೆ ಮಾತ್ರ ತನ್ನ ಜಾಹೀರಾತುಗಳನ್ನು ಕೊಡುತ್ತಾನೆ.

ಸ್ಥಾಪಿತವಾದಂದಿನಿಂದ ಸಂಸ್ಥೆ ಸಾಕಷ್ಟು ಪ್ರಗತಿ ಸಾಧಿಸಿದೆ. ಇದು ರಾಷ್ಟ್ರೀಯ ಹಾಗೂ ಪ್ರಾಂತೀಯ ಮಹತ್ವವನ್ನುಳ್ಳ ಸುಮಾರು 250 ಸದಸ್ಯರನ್ನು ಹೊಂದಿದೆ. 80 ಪ್ರಮುಖ ಜಾಹೀರಾತುದಾರರೂ ನಿಯತಕಾಲಿಕ ಪತ್ರಿಕೆಗಳೂ ವಿಭಾಗಗಳೂ ಬಹುಶಃ ಪ್ರಮುಖ ದೈನಂದಿನ ಪತ್ರಿಕೆಗಳೂ ವಾರಪತ್ರಿಕೆಗಳು ಇದೆ ಸದಸ್ಯತ್ವ ಪಡೆದಿದೆ. ಅಲ್ಲದೆ, ಅನೇಕ ಜಿಲ್ಲೆಗಳ 40ಕ್ಕೂ ಹೆಚ್ಚು ನಗರಗಳಲ್ಲಿರುವ ಇಂಗ್ಲಿಷ್ ಪತ್ರಿಕೆಗಳನ್ನೊಳಗೊಂಡ 14 ಭಾಷಾ ಪತ್ರಿಕೆಗಳೂ ಎ.ಬಿ.ಸಿ.ಯ ಸಾಮಥ್ರ್ಯವನ್ನು ಹೆಚ್ಚಿಸಿವೆ. ಸಿಲೋನ್, ಪಾಕಿಸ್ತಾನಗಳಲ್ಲಿ ಕೂಡ ಇದರ ಸದಸ್ಯ ಪತ್ರಿಕೆಗಳಿವೆ.									
(ಜಿ.ಸಿ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ